Delhi AQI 500: ಉಸಿರುಗಟ್ಟುತ್ತಿರುವ ರಾಜಧಾನಿ – ಇಂದು ದೆಹಲಿ, ನಾಳೆ ನಾವೇ?
“ದೆಹಲಿಯಲ್ಲಿ ಈಗ ಗಾಳಿ ಮಾರಾಟಕ್ಕಿಲ್ಲ, ಆದರೆ ಉಸಿರು ಖರೀದಿಸಬೇಕಾಗಿದೆ!”
ಎಂದಿನಂತೆ ದಿನ ಶುರುವಾಗುವ ಮೊದಲು ಮೊಬೈಲ್‌ಗೆ ಬರುವ ನೋಟಿಫಿಕೇಷನ್ ನೋಡುತ್ತಿರುವಾಗ ಈ ಸುದ್ದಿ ನೋಡಿ ಕ್ಷಣಮಾತ್ರಕ್ಕೆ ಬೆಚ್ಚಿ ಬಿದ್ದೆ. ಅದೇನೆಂದರೆ, ದೆಹಲಿ ವಾಯು ಗುಣಮಟ್ಟ ಸೂಚ್ಯಂಕ (Delhi AQI) 369 ಅಲ್ಲ, ಹಲವು ಕಡೆ 500 ದಾಟಿದೆ. ನಮ್ಮ ಹಳ್ಳಿಯಲ್ಲಿ AQI ಅಂದರೆ ಏನು ಅಂತ ಯಾರಿಗೂ ಗೊತ್ತಿಲ್ಲ, ಅಲ್ಲಿ ಗಾಳಿಗೆ ಇನ್ನೂ ವಾಸನೆ ಇದೆ. ಮಣ್ಣಿನ ವಾಸನೆ, ಹೂವಿನ ವಾಸನೆ.

ಆದರೆ ದೆಹಲಿಯಲ್ಲಿ ಗಾಳಿಗೆ ಈಗ ಬಣ್ಣ ಬಂದಿದೆ. ಕಂದು ಬಣ್ಣ. ಮನುಷ್ಯ ತನ್ನ ಉಸಿರನ್ನೇ ತಾನು ನೋಡುವಂತಾಗಿದೆ. ಇದು ವಿಚಿತ್ರವಲ್ಲವೇ? ಹಾಗಾದರೆ, ಈ ವಾಯುಮಾಲಿನ್ಯಕ್ಕೆ, ಇಂತಹ ಸ್ಥಿತಿಗತಿಗೆ ಕಾರಣಕರ್ತರು ಯಾರು? ಎಂದು ಯೋಚಿಸುತ್ತಿರುವಾಗ, ಥಟ್ಟನೇ ಯೋಚನೆಗೆ ಬಂದದ್ದು –
ಮೊದಲನೆಯದಾಗಿ,
ಪಂಜಾಬಿನ ರೈತ. ಅವನು ಭತ್ತದ ಹುಲ್ಲು ಸುಡುತ್ತಾನೆಂದು ಆತನನ್ನು ಬೈಯ್ಯುವುದು ಸುಲಭ. ಆದರೆ ಎಂದಾದರೂ ಒಂದು ಎಕರೆ ಭತ್ತದ ಹುಲ್ಲನ್ನು ಕೈಯಲ್ಲಿ ತೆಗೆದು ನೋಡಿದ್ದೀರಾ? ಅದೆಷ್ಟು ಭಾರ? ಅದನ್ನು ತೆಗೆಯಲು ಎಷ್ಟು ಖರ್ಚು? ಸರ್ಕಾರ ಕೊಡುವ ಯಂತ್ರ ಅವನ ಹೊಲಕ್ಕೆ ಬರುವುದೇ ಇಲ್ಲ. ಅವನಾದರು ಏನು ಮಾಡಿಯಾನು? ಅಷ್ಟಕ್ಕು ಅವನೇನು ವಿಜ್ಞಾನಿಯಲ್ಲ, ಅವನೊಬ್ಬ ಸಾಮಾನ್ಯ ರೈತ. ನಮ್ಮಂತೆಯೇ ಅವನು ಬದುಕಬೇಕಲ್ಲವೇ. ಅವನಿಗೆ ಭತ್ತದ ಹುಲ್ಲನ್ನು ಸುಡದೆ ಬೇರೆ ದಾರಿಯಿಲ್ಲ. ಯಂತ್ರದ ಬಾಡಿಗೆ ದುಬಾರಿ. ಸರ್ಕಾರದ ಸಹಾಯಧನ ಅವನಿಗೆ ತಲುಪುವುದೇ ಇಲ್ಲ. ಇನ್ನೇನು ಮಾಡಿಯಾನು? (Delhi AQI)
ಎರಡನೆಯದಾಗಿ,
ದೆಹಲಿಯ ಕಾರು. ನಾನು ಬೆಂಗಳೂರಿನಿಂದ ದೆಹಲಿಗೆ ಹೋಗಿದ್ದೆ. ಅಲ್ಲಿ ಒಂದು ಕುಟುಂಬದಲ್ಲಿ ನಾಲ್ಕು ಕಾರುಗಳಿವೆ. ಒಂದು ಮನೆಗೆ ನಾಲ್ಕು ಕಾರ? ಎಂದು ಪ್ರಶ್ನಿಸಿದರೆ, ‘ಸ್ಟೇಟಸ್ ಮೇಡಂ’ ಎಂದು ಉತ್ತರಿಸಿದರು. ಸ್ಟೇಟಸ್‌ಗೆ ನಾಲ್ಕು ಕಾರು ಬೇಕು, ಆದರೆ ಉಸಿರಾಡಲು? (Delhi AQI)
ಮೂರನೆಯದಾಗಿ,
ನಮ್ಮ ಚಳಿಗಾಲ. ಇದು ಪ್ರಕೃತಿಯ ನಿಯಮ. ಚಳಿಗಾಲ ಬಂದರೆ ಗಾಳಿ ಭಾರವಾಗುತ್ತದೆ, ಕೆಳಗೇ ಕೂರುತ್ತದೆ. ನಾವು ಮೇಲೆ ಬಿಟ್ಟ ಹೊಗೆಯಲ್ಲಾ ನಮ್ಮ ಮೂಗಿನ ಹತ್ತಿರವೇ ತೇಲುತ್ತದೆ. ಪ್ರಕೃತಿಯ ಲೆಕ್ಕಾಚಾರ ಬಹಳ ಸರಳ. ನೀನು ಕಸವನ್ನು ಮೇಲಕ್ಕೆ ಎಸೆದರೆ, ಅದು ಮತ್ತೆ ನಿನ್ನ ತಲೆಯ ಮೇಲೇ ಬೀಳುತ್ತದೆ. (Delhi AQI)
ಈಗ ಹೇಳಿ, ಈ ಮೂವರಲ್ಲಿ ತಪ್ಪಿತಸ್ಥ ಯಾರು? ರೈತನೋ, ಕಾರಿನವನೋ, ಚಳಿಗಾಲವೋ? ಯಾರೂ ಅಲ್ಲ. ತಪ್ಪು ನಮ್ಮ ಯೋಚನೆಯಲ್ಲಿದೆ.

ನಾವು ಗಾಳಿಯನ್ನು ಉಚಿತ ಎಂದುಕೊಂಡಿದ್ದೇವೆ. ಆದರೆ ನೀರು, ಗಾಳಿ, ಬೆಳಕು ಇದ್ಯಾವುದು ಕೂಡ ಉಚಿತವಲ್ಲ, ಅವುಗಳಿಗೆ ಅದರದ್ದೆ ಆದ ಬೆಲೆ ಇದೆ. ನಾವು ಅದನ್ನು ಮರೆತಿದ್ದೇವಷ್ಟೇ. ದೆಹಲಿಯಲ್ಲಿ ಇದೀಗ ಆ ಬೆಲೆಯನ್ನ ತೆರಬೇಕಾಗಿದೆ. ಒಂದು ಉಸಿರಿಗೆ ಎಷ್ಟು? ಏರ್ ಪ್ಯೂರಿಫೈಯರ್‌ಗೆ 20 ಸಾವಿರ. ಮಾಸ್ಕ್‌ಗೆ 500 ರೂಪಾಯಿ. ದುಡ್ಡಿರುವವನು ಹೇಗೋ ಬದುಕಿಬಿಡುತ್ತಾನೆ, ಆದರೆ ಬಡವರು ಏನು ಮಾಡಬೇಕು? ಅವನು ಕೆಮ್ಮುತ್ತಾ ಸಾಯಬೇಕೇ? (Delhi AQI)
ಸರ್ಕಾರ ಮಾಲಿನ್ಯ ವಿರೋಧಿ ಕಟ್ಟುನಿಟ್ಟಿನ ಕ್ರಮ (GRAP-4) ವನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ. ಟ್ರಕ್ ಸಂಚಾರ ನಿರ್ಬಂಧ, ವಾಹನಗಳ ಮೇಲೆ ಕಟ್ಟುನಿಟ್ಟಾದ ಕ್ರಮ, ನಿರ್ಮಾಣ ಕಾರ್ಯಗಳ ನಿಷೇಧ, ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿ, ಆನ್‌ಲೈನ್ ಅಥವಾ ಹೈಬ್ರಿಡ್ ಮೋಡ್‌ನಲ್ಲಿ ತರಗತಿಗಳನ್ನು ನಡೆಸಲು ಸಿದ್ಧತೆ ನಡೆಸುವುದು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಿ, ಉಳಿದವರಿಗೆ ವರ್ಕ್ ಫ್ರಮ್ ಹೋಮ್ ಕೊಡುವುದು ಹೀಗೆ ಹಲವು ಮಾರ್ಗಗಳನ್ನು ನೋಡುತ್ತ ಹೋದರೆ ಒಂದು ಕ್ಷಣ ನನಗೆ ಕೋವಿಡ್ ಸಮಯ ನೆನಪಾಗುತ್ತದೆ.
ಇಂದು ದೆಹಲಿಯಲ್ಲಿ (Delhi AQI) ಉಸಿರುಗಟ್ಟಿದ ವಾತಾವರಣ ಮೂಡಿದೆ, ನಾಳೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಇದೇ ಸರದಿ ಬರಲು ಹೆಚ್ಚು ಸಮಯ ಬೇಕಿಲ್ಲ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ನಾವೆಲ್ಲರೂ ಮಾಸ್ಕ್ ಹಾಕಿಕೊಂಡು ಬದುಕಬೇಕಾಗುತ್ತದೆ. ಸಿಲ್ಕ್ ಬೋರ್ಡ್‌ನಲ್ಲಿ ನಿಂತರೆ ಈಗಾಗಲೇ ದೆಹಲಿಯ ಟ್ರೇಲರ್ ಶುರುವಾಗಿದೆ ಎಂಬುದನ್ನು ನಾವಿಂದು ಅರ್ಥಮಾಡಿಕೊಳ್ಳಬೇಕಾಗಿದೆ.
ಹೊಗೆ ಮುಸುಕಿದ ಬಾನಿನಡಿ, ಚಿಟ್ಟೆ ಹಾರುವುದನ್ನೇ ಮರೆತಿದೆ
ಉಸಿರಿಗಾಗಿ ಹುಡುಕುತ್ತಿದೆ, ಮನುಷ್ಯನೇ ತನ್ನ ಎದೆಯೊಳಗೆ!

[…] Donald Trump: ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ… […]