
ಇದು ಕೇವಲ ಮೊಬೈಲ್ ವ್ಯಸನವಲ್ಲ (Reels Addiction), ಒಂದು ಸಾಂಸ್ಕೃತಿಕ ದುರಂತ! ಮನೆಯಲ್ಲಿ ನಾಲ್ಕು ಜನ ಇದ್ದರೂ ನಾಲ್ಕು ದ್ವೀಪಗಳಂತೆ ಬದುಕುತ್ತಿರುವ ಈ ಕಾಲದಲ್ಲಿ ನಾವು ಯೋಚಿಸಬೇಕಾದದ್ದು ಬಹಳಷ್ಟಿದೆ.
ನಿನ್ನೆ ಸಂಜೆ ನನ್ನ ಮನೆಗೆ ಒಬ್ಬ ಸ್ನೇಹಿತ ಬಂದಿದ್ದ. ಜೊತೆಯಲ್ಲಿ ಅವರ 16 ವರ್ಷದ ಮಗನೂ ಇದ್ದ. ನಾನು ಮಾತನಾಡಲು ಪ್ರಯತ್ನಿಸಿದರೆ ಆ ಹುಡುಗ ತಲೆಯೆತ್ತಿ ನೋಡಲೇ ಇಲ್ಲ. ಅವನ ಪ್ರಪಂಚವೆಲ್ಲ ಆರು ಇಂಚಿನ ಮೊಬೈಲ್ ಪರದೆಯೊಳಗೆ. ಅವನ ಬೆರಳು ಮೇಲೆ-ಕೆಳಗೆ ಓಡುತ್ತಲೇ ಇತ್ತು. ರೀಲ್ಸ್. ಒಂದರ ಹಿಂದೆ ಒಂದು ರೀಲ್ಸ್.
ನಾನು ಸುಮ್ಮನೆ ಕೇಳಿದೆ, “ಏನಪ್ಪಾ ನೋಡ್ತಾ ಇದ್ದೀಯಾ?”
ಅವನು ಹೇಳಿದ, “ಏನಿಲ್ಲ ಆಂಟಿ, ಟೈಮ್ ಪಾಸ್.
ಆ “ಟೈಮ್ ಪಾಸ್” ಎಂಬ ಎರಡು ಪದಗಳು ನನ್ನನ್ನು ಬಹಳ ಕಾಡಿದವು. ನಿಜಕ್ಕೂ ಟೈಮ್ ಪಾಸ್ ಆಗುತ್ತಿದೆಯೇ ಅಥವಾ ಟೈಮ್ ನಮ್ಮನ್ನು ಪಾಸ್ ಮಾಡಿ ಹೋಗುತ್ತಿದೆಯೇ?
Reels Addiction: ನನ್ನ ಪ್ರಕಾರ, ಇದು ಟೈಮ್ ಪಾಸ್ ಅಲ್ಲ, ಇದು ಲೈಫ್ ಪಾಸ್!
ಒಂದು ಕಾಲವಿತ್ತು! ಸಂಜೆಯಾಯಿತೆಂದರೆ ಊರಿನ ಕಟ್ಟೆಯ ಮೇಲೆ ಹಿರಿಯರು ಸೇರುತ್ತಿದ್ದರು. ರಾಮಾಯಣ, ಮಹಾಭಾರತದ ಕಥೆಗಳು, ಊರಿನ ಸುದ್ದಿಗಳು. ಮಕ್ಕಳು ಅಜ್ಜಿಯ ತೊಡೆಯ ಮೇಲೆ ಮಲಗಿ ಕಥೆ ಕೇಳುತ್ತಿದ್ದರು. ಆ ಕಥೆಗಳಲ್ಲಿ ನೀತಿ ಇತ್ತು, ಸಂಸ್ಕೃತಿ ಇತ್ತು, ಸಂಬಂಧಗಳ ಬೆಸುಗೆ ಇತ್ತು. ಈಗ ಕಟ್ಟೆಗಳಿಲ್ಲ, ಕಥೆ ಹೇಳುವ ಅಜ್ಜಿಯರಿಲ್ಲ. ಇದ್ದರೂ ಕೇಳುವ ಮಕ್ಕಳಿಲ್ಲ. ಎಲ್ಲವೂ ಮೊಬೈಲ್ ಕಟ್ಟೆಯಲ್ಲೇ ನಡೆಯುತ್ತದೆ.
ಮನೆಯಲ್ಲಿ ಅಪ್ಪ, ಅಮ್ಮ, ಮಕ್ಕಳಿದ್ದರು ಸಹ ಯಾರಿಗೂ ಯಾರ ಮಾತೂ ಕೇಳಿಸುವುದಿಲ್ಲ. ಎಲ್ಲರೂ ತಮ್ಮದೇ ಲೋಕದಲ್ಲಿ, ತಮ್ಮದೇ ರೀಲ್ಸ್ ಪ್ರಪಂಚದಲ್ಲಿ ಅಂದರೆ ಮೊಬೈಲ್ ಎಂಬ ಕಟ್ಟಕಟ್ಟೆಯಲ್ಲಿ ಬಂಧಿಯಾಗಿದ್ದರೆ. ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವ ವಿಧಾನ ತಪ್ಪಾಗಿದೆಯೇ? ಅಥವಾ ಆಧುನಿಕ ಜಗತ್ತು ನಮ್ಮನ್ನು ಬಂಧಿಯಾಗಿಸುತ್ತಿದೆಯೇ? ನಿಜಕ್ಕೂ ಇದು ಅತ್ಯಂತ ದೊಡ್ಡ ಸಾಂಸ್ಕೃತಿಕ ದುರಂತವೆಂದೇ ಹೇಳಬಹುದು.
ಇಂದಿನ ಯುವಕರಲ್ಲಿ ದೊಡ್ಡ ಕನಸುಗಳಿಗಿಂತ ಹೆಚ್ಚಾಗಿ, 30 ಸೆಕೆಂಡ್ ಗೆ ಸೀಮಿತವಾದ ಒಂದು ರೀಲ್ಸ್ ವೈರಲ್ ಆಗಬೇಕು, ಸಾವಿರ ಲೈಕ್ಸ್ ಬರಬೇಕು, ಹತ್ತು ಸಾವಿರ ಫಾಲೋವರ್ಸ್ ಆಗಬೇಕು. ಅಷ್ಟೇ.
ಹೀಗೆ ಒಮ್ಮೆ ಒಂದು ಹುಡುಗಿ ನನ್ನ ಬಳಿ ಬಂದು, “ಮೇಡಂ, ನಾನು ಇನ್ಫ್ಲುಯೆನ್ಸರ್ ಆಗಬೇಕು, ಅದಕ್ಕೆ ನಾನೇನು ಮಾಡಲಿ” ಎಂದು ಕೇಳಿದಳು.
ನಾನು ಕೇಳಿದೆ, “ಯಾವ ವಿಷಯದಲ್ಲಿ ಇನ್ಫ್ಲುಯೆನ್ಸ್ ಮಾಡ್ತೀಯಾ?” ಎಂದು ಪ್ರಶ್ನಿಸಿದರೆ, ಅವಳ ಬಳಿ ಉತ್ತರವಿರಲಿಲ್ಲ.
ಅಂದರೆ, ಇಂದಿನ ಯುವಕರಿಗೆ ಗುರಿ ಇಲ್ಲ, ಎಲ್ಲಿ ಪ್ರಯಾಣಿಸುತ್ತಿದ್ದೇನೆ ಎಂಬ ಅರಿವಿಲ್ಲ. ಒಟ್ಟಾರೆ ವೀವ್ಸ್, ಲೈಕ್ಸ್, ಫಾಲೋವರ್ಸ್ ಹೆಚ್ಚಾಗಬೇಕು ಅಷ್ಟೇ.
Ganesh Chaturthi 2026: ಪಠಿಸಲೇಬೇಕಾದ ಶಕ್ತಿಶಾಲಿ ಗಣಪತಿ ಮಂತ್ರಗಳು, ಪಠಿಸುವ ವಿಧಾನ ಮತ್ತು ಮಹತ್ವ
ಲೈಕ್ಸ್ ಗಾಗಿ ಪ್ರಾಣವನ್ನೇ ಪಣಕ್ಕಿಡುವ ಹುಚ್ಚು!
ಪತ್ರಿಕೆಗಳಲ್ಲಿ ಪ್ರತಿದಿನ ಒಂದು ಸುದ್ದಿ ಇದ್ದೆ ಇರುತ್ತದೆ. ರೀಲ್ಸ್ ಮಾಡಲು ಹೋಗಿ ರೈಲಿಗೆ ಸಿಲುಕಿ ಸಾವು, ಗುಡ್ಡದಿಂದ ಬಿದ್ದು ಸಾವು, ಲೈವ್ ಮಾಡುತ್ತಾ ಅಪಘಾತ. ಅರೆ, 15 ಸೆಕೆಂಡ್ ನ ಒಂದು ವಿಡಿಯೋಗೆ ನಿಮ್ಮ ಅಮೂಲ್ಯ ಜೀವವನ್ನೇ ಬಲಿ ಕೊಡುತ್ತೀರಾ? ಯಾವ ಲೈಕ್ಸ್, ಯಾವ ವ್ಯೂಸ್ ನಿಮ್ಮ ತಂದೆ-ತಾಯಿಯ ಕಣ್ಣೀರನ್ನು ಒರೆಸಲು ಸಾಧ್ಯ? ಇದಕ್ಕೆ ಕಾರಣ ಯಾರು? ಕೇವಲ ಮಕ್ಕಳದ್ದೇ ತಪ್ಪಾ? ಖಂಡಿತ ಇಲ್ಲ. ನಮ್ಮ ಪೋಷಕರದ್ದೂ ತಪ್ಪಿದೆ, ನಮ್ಮ ಶಿಕ್ಷಣ ವ್ಯವಸ್ಥೆಯದ್ದೂ ತಪ್ಪಿದೆ.
ಮಗು ಅಳುತ್ತಿದ್ದರೆ ಕೂಡಲೇ ಮೊಬೈಲ್ ಕೊಟ್ಟು ಸುಮ್ಮನಾಗಿಸುವ ಅಪ್ಪ-ಅಮ್ಮಂದಿರು ನಾವೇ. ಹೌದು, ಮಗುವಿನ ಜೊತೆ ಒಂದು ಗಂಟೆ ಕೂತು ಮಾತನಾಡುವ ತಾಳ್ಮೆ ನಮಗಿಲ್ಲ. ಮಗು ಏನು ನೋಡುತ್ತಿದೆ, ಯಾರನ್ನು ಫಾಲೋ ಮಾಡುತ್ತಿದೆ ಎಂದು ನೋಡುವ ವ್ಯವಧಾನ ನಮಗಿಲ್ಲ. ನಾವು ಮಕ್ಕಳಿಗೆ ಆಸ್ತಿ ಮಾಡಿಕೊಡುವ ಬಗ್ಗೆ ಯೋಚಿಸುತ್ತೇವೆಯೇ ಹೊರತು, ಸಂಸ್ಕಾರ ಕೊಡುವ ಬಗ್ಗೆ ಯೋಚಿಸುವುದಿಲ್ಲ.
ಹಾಗಾದರೆ, Reels Addiction ಇದರಿಂದ ಹೊರಬರುವುದು ಹೇಗೆ?
ನನ್ನ ಸಣ್ಣ ಸಲಹೆ ಇಷ್ಟೇ. ತಂತ್ರಜ್ಞಾನವನ್ನು ದ್ವೇಷಿಸಬೇಡಿ, ಅದನ್ನು ಅರ್ಥಮಾಡಿಕೊಳ್ಳಿ. ಚಾಕುವಿನಿಂದ ಹಣ್ಣನ್ನೂ ಕತ್ತರಿಸಬಹುದು, ಕೈಯನ್ನೂ ಕತ್ತರಿಸಿಕೊಳ್ಳಬಹುದು. ಆಯ್ಕೆ ನಿಮ್ಮದು.
ದಿನಕ್ಕೆ ಒಂದು ಗಂಟೆಯಾದರೂ ಮನೆಯಲ್ಲಿ ಎಲ್ಲರೂ ಮೊಬೈಲ್ ಆಫ್ ಮಾಡಿ. ಒಟ್ಟಿಗೆ ಊಟ ಮಾಡಿ, ಮಾತನಾಡಿ, ಜಗಳವಾಡಿ, ನಗಾಡಿ. ಮಕ್ಕಳನ್ನು ಮೈದಾನಕ್ಕೆ ಕಳುಹಿಸಿ. ಬೆವರು ಹರಿಸಲಿ, ಬಿದ್ದು ಗಾಯ ಮಾಡಿಕೊಳ್ಳಲಿ, ಅದು ನಿಜವಾದ ಬದುಕು.
ನೆನಪಿಡಿ, ನಿಮ್ಮ ಬದುಕಿನ ಮೌಲ್ಯವನ್ನು ಇನ್ಸ್ಟಾಗ್ರಾಮ್ ನ ಫಾಲೋವರ್ಸ್ ಸಂಖ್ಯೆ ನಿರ್ಧರಿಸುವುದಿಲ್ಲ. ನಿಮ್ಮ ವ್ಯಕ್ತಿತ್ವವನ್ನು ಫಿಲ್ಟರ್ ಗಳಿಂದ ಅಳೆಯಲು ಸಾಧ್ಯವಿಲ್ಲ. ಮೊಬೈಲ್ ಕೆಳಗಿಟ್ಟು ಒಮ್ಮೆ ಆಕಾಶ ನೋಡಿ. ಅಲ್ಲಿ ಕಾಣುವ ಚಂದ್ರ, ನಕ್ಷತ್ರಗಳು ಯಾವ ರೀಲ್ಸ್ ನಲ್ಲೂ ಸಿಗುವುದಿಲ್ಲ. ತಂತ್ರಜ್ಞಾನ ನಮ್ಮ ಗುಲಾಮನಾಗಿರಬೇಕೆ ಹೊರತು ನಾವು ಅದರ ಗುಲಾಮರಾಗಬಾರದು. ಈಗಲಾದರೂ ಎಚ್ಚೆತ್ತುಕೊಳ್ಳೋಣವೇ?

[…] […]