ಬಾಹ್ಯಾಕಾಶ ಸುಧಾರಣೆ ಹೆಸರಿನಲ್ಲಿ ದೇಶದ ಹೆಮ್ಮೆಯ ಇಸ್ರೋದ ಪ್ರಮುಖ ತಂತ್ರಜ್ಞಾನಗಳನ್ನು ಖಾಸಗಿಯವರಿಗೆ (ISRO Privatization) ಹಸ್ತಾಂತರಿಸುವ ಕೇಂದ್ರ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗಿದ್ದು, ಈ ಕುರಿತು ಹಲವು ಸಂಘಟನೆಗಳು ಉದ್ಯೋಗ ಭದ್ರತೆ ಮತ್ತು ರಾಷ್ಟ್ರೀಯ ಭದ್ರತೆಗೆ ಕುತ್ತು ತರುತ್ತವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
| ಹೈಲೈಟ್ಸ್: |
|
ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ತಂತ್ರಜ್ಞಾನ, ಉತ್ಪಾದನೆ, ಕಾರ್ಯಚರಣೆ ಸೇರಿದಂತೆ ಕೆಲವು ಪ್ರಮುಖ ಜವಾಬ್ದಾರಿಗಳನ್ನು ಕೇಂದ್ರ ಸರ್ಕಾರವು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳು ಮತ್ತು ಸಾರ್ವಜನಿಕ ವಲಯದ ಕಂಪವಿಗಳಿಗೆ ವರ್ಗಾಹಿಸುವ ಪ್ರಸ್ತಾವನೆ ಕುರಿತು ಇಸ್ರೋದ ವಿವಿಧ ಸಿಬ್ಬಂದಿ ಸಂಘಗಳು ಮತ್ತು ವಿಜ್ಞಾನಿಗಳ ಒಕ್ಕೂಟಗಳು ಈ ನಿರ್ಧಾರವನ್ನು ಖಂಡಿಸಿದ್ದು, ಇದು ಇಸ್ರೋದ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ, ಅದಾಗ್ಯೂ ಸುಧಾರಣೆಗಳ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುತ್ತಿದೆ. ಈಗಾಗಲೇ IN-SPACe (ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಅಂಡ್ ಆಥರೈಸೇಷನ್ ಸೆಂಟರ್) ಮತ್ತು NSIL (ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್) ಮೂಲಕ ಖಾಸಗಿ ಸಂಸ್ಥೆಗಳು ಉಪಗ್ರಹ ಉಡಾವಣೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಇದೀಗ ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (SSLV) ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ನಂತಹ ಪ್ರಮುಖ ಮತ್ತು ಕಡಿಮೆ ವೆಚ್ಚದ ಉಡಾವಣಾ ವಾಹನಗಳ ಸಂಪೂರ್ಣ ತಂತ್ರಜ್ಞಾನವನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸಲು ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಸಿಬ್ಬಂದಿ ವಲಯದಲ್ಲಿ ಆತಂಕ ಸೃಷ್ಟಿಸಿದೆ.

ISRO Privatization: ಉದ್ಯೋಗಿಗಳ ಭವಿಷ್ಯ ಅತಂತ್ರ
ಈ ನಿರ್ಧಾರದಿಂದ ಸಾವಿರಾರು ಉದ್ಯೋಗಿಗಳ ಭವಿಷ್ಯ ಅತಂತ್ರವಾಗಲಿದೆ ಎಂದು ಆಲ್ ಇಂಡಿಯಾ ಇಸ್ರೋ ಎಂಪ್ಲಾಯೀಸ್ ಫೆಡರೇಷನ್ ಆರೋಪಿಸಿದೆ. ಇಸ್ರೋದಲ್ಲಿ ಸುಮಾರು 17,000 ಕ್ಕೂ ಹೆಚ್ಚು ವಿಜ್ಞಾನಿಗಳು, ಎಂಜಿನಿಯರ್ಗಳು ಮತ್ತು ತಾಂತ್ರಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ದಶಕಗಳ ಕಾಲ ಶ್ರಮಿಸಿ, ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಿದರೆ, ಸಿಬ್ಬಂದಿಯ ಕೆಲಸಕ್ಕೆ ಬೆಲೆ ಇಲ್ಲದಂತಾಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ನೇಮಕಾತಿ ಕಡಿತ, ಉದ್ಯೋಗ ಭದ್ರತೆ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕಿಂತ ಮುಖ್ಯವಾಗಿ ಇದು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿದೆ ಎಂದು ಕೆಲವು ಸಂಘಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಬಾಹ್ಯಾಕಾಶ ತಂತ್ರಜ್ಞಾನವು ನೇರವಾಗಿ ದೇಶದ ಭದ್ರತೆ, ಗಡಿ ಕಣ್ಗಾವಲು, ಸಂವಹನ ವ್ಯವಸ್ಥೆಗೆ ಸಂಬಂಧಿಸಿದೆ. ಇಂತಹ ಅತ್ಯಂತ ಸೂಕ್ಷ್ಮ ಮತ್ತು ಗೌಪ್ಯ ತಂತ್ರಜ್ಞಾನವನ್ನು ಲಾಭದ ಉದ್ದೇಶ ಹೊಂದಿರುವ ಖಾಸಗಿ ಕಂಪನಿಗಳಿಗೆ ನೀಡುವುದು ಎಷ್ಟು ಸರಿ? ಒಂದು ವೇಳೆ ಈ ತಂತ್ರಜ್ಞಾನವು ತಪ್ಪು ಕೈಗಳಿಗೆ ಹೋದರೆ ಅಥವಾ ವಿದೇಶಿ ಕಂಪನಿಗಳಿಗೆ ಸೋರಿಕೆಯಾದರೆ ದೇಶದ ಭದ್ರತೆಗೆ ದೊಡ್ಡ ಕುತ್ತು ಬರಲಿದೆ ಎಂದು ಎಚ್ಚರಿಸಿದ್ದಾರೆ.
ISRO Privatization ಗೆ ಕೇಂದ್ರದ ವಾದವೇನು?
ಕೇಂದ್ರ ಸರ್ಕಾರ ಮತ್ತು ಇಸ್ರೋ ಆಡಳಿತ ಮಂಡಳಿಯ ವಾದ ಬೇರೆಯೇ ಇದೆ. ಇಸ್ರೋ ಇನ್ನು ಮುಂದೆ ಸಂಶೋಧನೆ ಮತ್ತು ಆಳವಾದ ಬಾಹ್ಯಾಕಾಶ ಮಿಷನ್ಗಳಾದ ಚಂದ್ರಯಾನ, ಮಂಗಳಯಾನ, ಗಗನಯಾನದಂತಹ ದೊಡ್ಡ ಯೋಜನೆಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ದಿನನಿತ್ಯದ ಉಪಗ್ರಹ ಉಡಾವಣೆಯಂತಹ ವಾಣಿಜ್ಯ ಚಟುವಟಿಕೆಗಳನ್ನು ಖಾಸಗಿ ವಲಯಕ್ಕೆ ಬಿಟ್ಟುಕೊಟ್ಟರೆ ಇಸ್ರೋ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ದೇಶದಲ್ಲಿ ಬಾಹ್ಯಾಕಾಶ ಆರ್ಥಿಕತೆ ಬೆಳೆಯುತ್ತದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.
ಸಿಬ್ಬಂದಿ ಸಂಘಗಳು ಮಾತ್ರ ಸರ್ಕಾರದ ಈ ವಾದವನ್ನು ಒಪ್ಪುತ್ತಿಲ್ಲ. ಖಾಸಗಿ ಕಂಪನಿಗಳು ಲಾಭಕ್ಕಾಗಿ ಮಾತ್ರ ಕೆಲಸ ಮಾಡುತ್ತವೆ, ಸಂಶೋಧನೆಗಾಗಿ ಅಲ್ಲ. ಇಸ್ರೋವನ್ನು ಕಟ್ಟಿ ಬೆಳೆಸಿದ್ದು ಸಾರ್ವಜನಿಕ ಹಣದಿಂದ, ಜನರ ತೆರಿಗೆ ಹಣದಿಂದ. ಅದನ್ನು ಖಾಸಗಿಯವರಿಗೆ ಧಾರೆ ಎರೆಯುವುದು ಸರಿಯಲ್ಲ. ಇಸ್ರೋದ ಖಾಸಗೀಕರಣ (ISRO Privatization)ವನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ಸೆಪ್ಟೆಂಬರ್ 20 ರಂದು ಬೆಂಗಳೂರು, ಶ್ರೀಹರಿಕೋಟಾ, ತಿರುವನಂತಪುರಂ ಸೇರಿದಂತೆ ಎಲ್ಲಾ ಇಸ್ರೋ ಕೇಂದ್ರಗಳ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಲು ಸಂಘಗಳು ನಿರ್ಧರಿಸಿವೆ.

[…] […]