HESCOM: ವಿದ್ಯುತ್ ಅವಘಡಗಳಿಗೆ ಬ್ರೇಕ್ ಹಾಕಲು ಹೆಸ್ಕಾಂನಿಂದ ಭರ್ಜರಿ ಕಾರ್ಯಾಚರಣೆ
HESCOM: ವಿದ್ಯುತ್ ಅವಘಡಗಳಿಗೆ ಬ್ರೇಕ್ ಹಾಕಲು ಹೆಸ್ಕಾಂನಿಂದ ಭರ್ಜರಿ ಕಾರ್ಯಾಚರಣೆ ಮತ್ತು ರೈತರು, ಜಾನುವಾರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹೆಸ್ಕಾಂನಿಂದ ಮುನ್ನೆಚ್ಚರಿಕೆಯ ಸುರಕ್ಷತಾ ಕವಚ
| ಹೈಲೈಟ್ಸ್: |
| • ಹಾವೇರಿ ಜಿಲ್ಲೆಯಾದ್ಯಂತ ವಿದ್ಯುತ್ ಜಾಲದ ಸಮಗ್ರ ದುರಸ್ತಿ ಮತ್ತು ನಿರ್ವಹಣೆ • ಕಂಬ, ತಂತಿ, ಪರಿವರ್ತಕಗಳ ದುರಸ್ತಿಗೆ ವಿಶೇಷ ಆದ್ಯತೆ • ರೈತರು, ಜಾನುವಾರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹೆಸ್ಕಾಂನಿಂದ ಮುನ್ನೆಚ್ಚರಿಕೆಯ ಸುರಕ್ಷತಾ ಕವಚ |
ಹಾವೇರಿ, ನ. 07, 2026: ಸಂಭವನೀಯ ವಿದ್ಯುತ್ ಅವಘಡಗಳಿಗೆ ಮುಂಚಿತವಾಗಿಯೇ ಕಡಿವಾಣ ಹಾಕಿ, ಜನಜೀವನದ ಸುರಕ್ಷತೆ ಹಾಗೂ ಸುಗಮ ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸುವ ಮಹತ್ವದ ಸಂಕಲ್ಪದೊಂದಿಗೆ ಹೆಸ್ಕಾಂ ಹಾವೇರಿ ವೃತ್ತ ವ್ಯಾಪ್ತಿಯಲ್ಲಿ ವಿದ್ಯುತ್ ಜಾಲ ನಿರ್ವಹಣಾ ಬೃಹತ್ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ನಿರ್ದೇಶನದಂತೆ ಹಾವೇರಿ ಮತ್ತು ರಾಣೆಬೆನ್ನೂರು ವಿಭಾಗಗಳ ವ್ಯಾಪ್ತಿಯಲ್ಲಿ ವ್ಯಾಪಕ ನಿರ್ವಹಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಾವೇರಿ, ಶಿಗ್ಗಾಂವಿ, ಸವಣೂರು, ಹಾನಗಲ್, ರಾಣೆಬೆನ್ನೂರು-1 (CSD), ರಾಣೆಬೆನ್ನೂರು-2 (RSD), ಬ್ಯಾಡಗಿ, ಹಿರೇಕೆರೂರು ಹಾಗೂ ರಟ್ಟಿಹಳ್ಳಿ ಉಪವಿಭಾಗಗಳ ವ್ಯಾಪ್ತಿಯ ವಿವಿಧ ಗ್ರಾಮಗಳ ವಿದ್ಯುತ್ ಮಾರ್ಗಗಳಲ್ಲಿ ಈ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಪಾಯಕಾರಿ ವಿದ್ಯುತ್ ಮಾರ್ಗಗಳಿಗೆ ದುರಸ್ತಿಯ ಸ್ಪರ್ಶ:
ವಿದ್ಯುತ್ ಜಾಲದ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾಲಿರುವ ಎಲ್.ಟಿ. ಹಾಗೂ 11 ಕೆ.ವಿ. ವಿದ್ಯುತ್ ಕಂಬಗಳನ್ನು ನೇರಗೊಳಿಸುವುದು, ಅಪಾಯಕಾರಿಯಾಗಿ ಸಡಿಲಗೊಂಡಿರುವ ವಿದ್ಯುತ್ ತಂತಿಗಳನ್ನು ಬಿಗಿಗೊಳಿಸುವುದು, ವಿದ್ಯುತ್ ಮಾರ್ಗಗಳಿಗೆ ಅಡ್ಡಿಯಾಗುವಂತೆ ಬೆಳೆದಿರುವ ಗಿಡಗಂಟೆಗಳು, ಬಳ್ಳಿಗಳು ಹಾಗೂ ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. (HESCOM)
ವಿವಿಧ ಫೀಡರ್ಗಳ ವ್ಯಾಪ್ತಿಯಲ್ಲಿರುವ ವಿದ್ಯುತ್ ಪರಿವರ್ತಕ ಕೇಂದ್ರಗಳ (ಡಿ.ಟಿ.ಸಿ.) ಸುತ್ತಮುತ್ತಲಿನ ಗಿಡಗಂಟೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಛಗೊಳಿಸುವುದು, ಪರಿವರ್ತಕ ಕೇಂದ್ರಗಳ ಎಲ್.ಟಿ. ವೈರಿಂಗ್ ಕೇಬಲ್ಗಳ ದುರಸ್ತಿ ಹಾಗೂ ಟಿ.ಸಿ. ಸಮೀಪದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯಗಳನ್ನೂ ಸಮರೋಪಾದಿಯಲ್ಲಿ ನಿರ್ವಹಿಸಲಾಗುತ್ತಿದೆ.
CBSE Board Exam 2027: ಟೈಮ್ಟೇಬಲ್ ಬಿಡುಗಡೆ! ಫೆಬ್ರವರಿ 16ರಿಂದ ಪರೀಕ್ಷೆ ಆರಂಭ, 46 ಲಕ್ಷ ವಿದ್ಯಾರ್ಥಿಗಳು ಹಾಜರು
ವಿವಿಧ ಗ್ರಾಮಗಳಲ್ಲಿ ಸುರಕ್ಷತಾ ಕಾರ್ಯಕ್ಕೆ ವೇಗ:
ಹೊನ್ನತ್ತಿ, ಪರಮವಾಡಿ, ಯತ್ತಿನಹಳ್ಳಿ, ಗರಡಿಮನಿ, ಯಲವಿಗಿ, ತಡಕನಹಳ್ಳಿ, ಮಾಸೂರು, ಗಂಗಾಪುರ, ಕೊಡ, ಕುರ್ಶಾಪುರ, ವನಹಳ್ಳಿ, ಅಲ್ಲಿಪುರ, ಹುಲಸೋಗಿ, ಹೋತನಹಳ್ಳಿ, ಬಂಕಾಪುರ ಹಾಗೂ ಹಟ್ಟಿಮತ್ತೂರು ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳ ವಿದ್ಯುತ್ ಮಾರ್ಗಗಳಲ್ಲಿ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ವಿದ್ಯುತ್ ಮಾರ್ಗಗಳ ಸುತ್ತಮುತ್ತ ಉಂಟಾಗಬಹುದಾದ ಅಪಾಯಕಾರಿ ಪರಿಸ್ಥಿತಿಗಳನ್ನು ನಿವಾರಿಸುವುದರೊಂದಿಗೆ ವಿದ್ಯುತ್ ವಿತರಣಾ ಜಾಲದ ಸುಸ್ಥಿತಿಗೆ ಆದ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ. (HESCOM)
ಅವಘಡ ತಡೆ ಹೆಸ್ಕಾಂನ ಮೊದಲ ಆದ್ಯತೆ:
ಸಂಬಂಧಪಟ್ಟ ವಿಭಾಗ ಹಾಗೂ ಉಪವಿಭಾಗಗಳ ಅಧಿಕಾರಿಗಳು ಮತ್ತು ನುರಿತ ನಿರ್ವಹಣಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೇವಲ ವಿದ್ಯುತ್ ವ್ಯತ್ಯಯ ಉಂಟಾದಾಗ ದುರಸ್ತಿ ಕೈಗೊಳ್ಳುವುದಷ್ಟೇ ಅಲ್ಲದೆ, ಸಂಭಾವ್ಯ ಅಪಾಯಗಳನ್ನು ಮೊದಲೇ ಗುರುತಿಸಿ ಅವುಗಳನ್ನು ನಿವಾರಿಸುವ ಮುನ್ನೆಚ್ಚರಿಕಾ ಕ್ರಮಗಳಿಗೆ ಹೆಸ್ಕಾಂ (HESCOM) ಹೆಚ್ಚಿನ ಒತ್ತು ನೀಡುತ್ತಿದೆ.
ವಿದ್ಯುತ್ ಜಾಲದ ನಿರಂತರ ಮೇಲ್ವಿಚಾರಣೆ, ಕಾಲಕಾಲಕ್ಕೆ ಅಗತ್ಯ ನಿರ್ವಹಣೆ ಹಾಗೂ ಅಪಾಯಕಾರಿ ಸ್ಥಳಗಳ ತ್ವರಿತ ದುರಸ್ತಿಯಿಂದ ವಿದ್ಯುತ್ ವ್ಯತ್ಯಯದ ಸಾಧ್ಯತೆಗಳನ್ನು ತಗ್ಗಿಸುವುದರೊಂದಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಗೆ ಮತ್ತಷ್ಟು ಬಲ ದೊರೆಯಲಿದೆ. ಸಾರ್ವಜನಿಕರ ಜೀವ ರಕ್ಷಣೆ, ರೈತರ ಬೆಳೆಗಳ ಹಾಗೂ ಜಾನುವಾರುಗಳ ಸುರಕ್ಷತೆ ಮತ್ತು ಸುಸ್ಥಿರ ವಿದ್ಯುತ್ ವಿತರಣಾ ವ್ಯವಸ್ಥೆಯ ನಿರ್ಮಾಣವೇ ಈ ಕಾರ್ಯಾಚರಣೆಯ ಪ್ರಮುಖ ಆಶಯವಾಗಿದೆ ಎಂದು ಹೆಸ್ಕಾಂ (HESCOM) ಪ್ರಕಟಣೆಯಲ್ಲಿ ತಿಳಿಸಿದೆ.
