Dvg Fire Accident: ರಸ್ತೆ ಬದಿ ಟ್ರಾನ್ಸ್ಫಾರ್ಮರ್ ಸ್ಫೋಟ – ಗುಜರಿ ಅಂಗಡಿ, ಟಾಟಾ ಏಸ್, ಬೈಕ್ ಭಸ್ಮ!
Dvg Fire Accident ಕೆಟಿಜೆ ನಗರದ 8ನೇ ಕ್ರಾಸ್ನಲ್ಲಿ ನಡುಕ ಹುಟ್ಟಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ; 2 ಗಂಟೆ ಹರಸಾಹಸ ಪಟ್ಟು ಬೆಂಕಿ ನಂದಿಸಿದ ಅಗ್ನಿಶಾಮಕ ದಳ
ದಾವಣಗೆರೆ (ನ.03): ಬೆಣ್ಣೆ ನಗರಿ ದಾವಣಗೆರೆಯಲ್ಲಿ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ಫಾರ್ಮರ್ (ಟಿಸಿ) ಏಕಾಏಕಿ ಭೀಕರವಾಗಿ ಸ್ಫೋಟಗೊಂಡಿದ್ದು (Dvg Fire Accident), ಪಕ್ಕದಲ್ಲಿದ್ದ ಗುಜರಿ ಅಂಗಡಿ, ಟಾಟಾ ಏಸ್ ವಾಹನ ಹಾಗೂ ದ್ವಿಚಕ್ರ ವಾಹನ ಕ್ಷಣಾರ್ಧದಲ್ಲಿ ಹೊತ್ತಿ ಉರಿದು ಭಸ್ಮವಾಗಿವೆ. ಈ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಗರದ ಕೆಟಿಜೆ ನಗರದ 8ನೇ ಕ್ರಾಸ್ನಲ್ಲಿ ಈ ದುರ್ಘಟನೆ ನಡೆದಿದೆ. ಜನನಿಬಿಡ ರಸ್ತೆಯಲ್ಲಿ ಎಲ್ಲವೂ ಸಹಜವಾಗಿದ್ದಾಗಲೇ ಟ್ರಾನ್ಸ್ಫಾರ್ಮರ್ ಬೆಂಕಿ (Dvg Fire Accident) ಚೆಂಡಿನಂತೆ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಬೆಂಕಿಯ ಕಿಡಿಗಳು ರಸ್ತೆಯುದ್ದಕ್ಕೂ ಚೆಲ್ಲಿವೆ. ಜನರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸ್ಫೋಟದ ತೀವ್ರತೆಗೆ ಬೆಂಕಿ ಪಕ್ಕದ ಗುಜರಿ ಅಂಗಡಿಗೆ ವ್ಯಾಪಿಸಿದೆ. ಅಂಗಡಿ ಮುಂದೆ ನಿಂತಿದ್ದ ಟಾಟಾ ಏಸ್ ಗೂಡ್ಸ್ ವಾಹನ ಹಾಗೂ ಬೈಕ್ ಸುಟ್ಟು ಕರಕಲಾಗಿವೆ. ಹಳೆ ಪೇಪರ್ ಹಾಕಲು ಬಂದಿದ್ದ ಹನುಮಂತ ಎಂಬುವವರ ಬೈಕ್ ಕೂಡ ಆಹುತಿಯಾಗಿದೆ. ಕಣ್ಣೆದುರೇ ತಮ್ಮ ಬೈಕ್ ಸುಟ್ಟು ಹೋಗಿದ್ದನ್ನು ಕಂಡು ಮಾಲೀಕ ಹನುಮಂತ ಕಣ್ಣೀರಿಟ್ಟಿದ್ದಾರೆ.
ಬೆಂಕಿ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಲು ಶುರುವಾದಾಗ ಸ್ಥಳೀಯರು ಆತಂಕಗೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ 2 ಗಂಟೆಗಳ ಕಾಲ (Dvg Fire Accident) ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಸಕಾಲದಲ್ಲಿ ಕಾರ್ಯಾಚರಣೆ ನಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಆದರೂ ಲಕ್ಷಾಂತರ ರೂ. ನಷ್ಟವಾಗಿದೆ.
ಬೆಸ್ಕಾಂ ನಿರ್ಲಕ್ಷ್ಯ ಆರೋಪ: ಬೆಳಗ್ಗೆಯಿಂದಲೇ ಟ್ರಾನ್ಸ್ಫಾರ್ಮರ್ನಿಂದ ಕಿಡಿಗಳು ಬರುತ್ತಿದ್ದವು, ಬೆಸ್ಕಾಂಗೆ ಕರೆ ಮಾಡಿ ಹೇಳಿದರೂ ಯಾರೂ ಬರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಆರೋಪಿಸಿ, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
