Sakala Services Big Update: ‘ಸಕಾಲ’ದ ವ್ಯಾಪ್ತಿಗೆ 35 ಸರ್ಕಾರಿ ಸೇವೆಗಳು ಸೇರ್ಪಡೆ – ಸರ್ಕಾರಿ ನೌಕರರ ಸೇವೆಗಳಿಗೆ ಹೊಣೆಗಾರಿಕೆಗೆ ಮತ್ತಷ್ಟು ಬಲ
ರಜೆ, ವೇತನ, ಪಿಂಚಣಿ, ವರ್ಗಾವಣೆ, ನಿವೃತ್ತಿ ಸೇರಿದಂತೆ 35 ಸೇವೆಗಳಿಗೆ ಕಾಲಮಿತಿ ನಿಗದಿ - ವಿಳಂಬ ಮಾಡಿದ ಅಧಿಕಾರಿಗಳಿಗೆ ದಂಡ, ಸಿಬ್ಬಂದಿಗೆ ತ್ವರಿತ ಸೇವೆ (Sakala Services)
ಹೈಲೈಟ್ಸ್: |
|
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಸಕಾಲ (Sakala)’ ಯೋಜನೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಸರ್ಕಾರಿ ನೌಕರರಿಗೆ ಸಂಬಂಧಿಸಿದ 35 ಪ್ರಮುಖ ಸೇವೆಗಳನ್ನು ಸಕಾಲ ಕಾಯ್ದೆಯಡಿ ತರಲಾಗಿದೆ. ಈ ಮೂಲಕ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಸಿಬ್ಬಂದಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ.

ಸರ್ಕಾರಿ ನೌಕರರ ರಜೆ, ವೇತನ, ಸೇವಾವಧಿ ವಿಸ್ತರಣೆ, ವೈದ್ಯಕೀಯ ರಜೆ, ಪಿಂಚಣಿ, ನಿವೃತ್ತಿ, ವರ್ಗಾವಣೆ ಹಾಗೂ ಸೇವಾ ದಾಖಲೆಗಳಿಗೆ ಸಂಬಂಧಿಸಿದ 35 ಸೇವೆಗಳನ್ನು ಸಕಾಲಕ್ಕೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈವರೆಗೆ ಸಕಾಲ ಕಾಯ್ದೆಯು ಮುಖ್ಯವಾಗಿ ಸಾರ್ವಜನಿಕರಿಗೆ ಸಂಬಂಧಿಸಿದ ಸೇವೆಗಳಾದ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಪಹಣಿ ಮತ್ತಿತರ ಸೇವೆಗಳಿಗೆ ಸೀಮಿತವಾಗಿತ್ತು. ಇದೀಗ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ನೌಕರರ ಆಂತರಿಕ ಸೇವೆಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ.
Sakala Services: ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ
ಈ ಹೊಸ ಕ್ರಮದಿಂದ ಸರ್ಕಾರಿ ನೌಕರರು ತಮ್ಮ ಸೇವಾ ವಿಷಯಗಳಿಗಾಗಿ ತಿಂಗಳುಗಟ್ಟಲೆ ಇಲಾಖೆಗಳ ಸುತ್ತ ಅಲೆಯುವ ಪರಿಸ್ಥಿತಿಗೆ ಬ್ರೇಕ್ ಬೀಳಲಿದೆ. ಉದಾಹರಣೆಗೆ, ನಿವೃತ್ತಿ ನಂತರ ಪಿಂಚಣಿ ಮಂಜೂರಾತಿ, ವೇತನ ಬಾಕಿ, ವೈದ್ಯಕೀಯ ರಜೆ ಮಂಜೂರಾತಿ, ಸೇವಾ ಪುಸ್ತಕದಲ್ಲಿನ ತಿದ್ದುಪಡಿ, ವರ್ಗಾವಣೆ ಆದೇಶದ ಪ್ರತಿ ಪಡೆಯುವುದು ಮುಂತಾದ ಕೆಲಸಗಳಿಗೆ ಈಗ ಕಾಲಮಿತಿ ನಿಗದಿಯಾಗಲಿದೆ. ನಿಗದಿತ ಅವಧಿಯೊಳಗೆ ಸೇವೆ ನೀಡದ ಅಧಿಕಾರಿಗಳ ವಿರುದ್ಧ ಸಕಾಲ (Sakala Services) ಕಾಯ್ದೆಯಡಿ ದಂಡ ವಿಧಿಸುವ ಮತ್ತು ಶಿಸ್ತು ಕ್ರಮ ಕೈಗೊಳ್ಳುವ ಅವಕಾಶವೂ ಇರಲಿದೆ.
ಸಕಾಲದಡಿ ಈಗಿರುವ ಸಕ್ಷಮ ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರದ ವ್ಯವಸ್ಥೆಯೂ ಮುಂದುವರಿಯಲಿದೆ. ಒಂದು ವೇಳೆ ಮೊದಲ ಹಂತದಲ್ಲಿ ಸೇವೆ ಸಿಗದಿದ್ದರೆ, ನೌಕರರು ಮೇಲ್ಮನವಿ ಸಲ್ಲಿಸಬಹುದಾಗಿದ್ದು, ಮೇಲ್ಮನವಿಗಳ ಇತ್ಯರ್ಥಕ್ಕೂ ಕಾಲಮಿತಿ ನಿಗದಿಪಡಿಸಲಾಗಿದೆ. ಇದರಿಂದ ಕೆಳಹಂತದ ಅಧಿಕಾರಿಗಳು ವಿಳಂಬ ಮಾಡಿದರೂ, ಮೇಲಧಿಕಾರಿಗಳ ಮಧ್ಯಪ್ರವೇಶದಿಂದ ತ್ವರಿತವಾಗಿ ಸೇವೆ ಸಿಗಲಿದೆ.
Gruha Lakshmi Benefits : ಮಹಿಳೆಯರ ಖಾತೆಗೆ ಪ್ರತಿ ತಿಂಗಳು 3000 ರೂಪಾಯಿ? ಹೊಸ ಯೋಜನೆ ಬಗ್ಗೆ ಬಿಗ್ ಅಪ್ಡೇಟ್!
ಸರ್ಕಾರದ ಈ ನಿರ್ಧಾರಕ್ಕೆ (Sakala Services) ಸರ್ಕಾರಿ ನೌಕರರ ಸಂಘಗಳು ಸ್ವಾಗತ ವ್ಯಕ್ತಪಡಿಸಿವೆ. “ನಾವು ಸಾರ್ವಜನಿಕರಿಗೆ ಸಕಾಲದಡಿ ಸೇವೆ ನೀಡುತ್ತೇವೆ, ಆದರೆ ನಮ್ಮದೇ ಸೇವೆಗಳಾದ ಪಿಂಚಣಿ, ಜಿಪಿಎಫ್, ರಜೆ ಮಂಜೂರಾತಿಗೆ ವರ್ಷಗಟ್ಟಲೆ ಕಾಯಬೇಕಿತ್ತು. ಈಗ ನಮಗೂ ಸಕಾಲ ರಕ್ಷಣೆ ಸಿಕ್ಕಂತಾಗಿದೆ. ಇದು ನೌಕರರ ಮನೋಸ್ಥೈರ್ಯ ಹೆಚ್ಚಿಸಲಿದೆ” ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಆಡಳಿತ ಸುಧಾರಣಾ ಇಲಾಖೆಯ ಪ್ರಕಾರ, ಸರ್ಕಾರಿ ನೌಕರರ ಸೇವಾ ವಿಷಯಗಳಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದವು. ಅದರಲ್ಲೂ ನಿವೃತ್ತಿ ಮತ್ತು ಪಿಂಚಣಿ ಪ್ರಕರಣಗಳಲ್ಲಿ ವಿಳಂಬದಿಂದ ನೌಕರರು ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಸಕಾಲ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಎಲ್ಲಾ ಇಲಾಖೆಗಳಿಗೂ ಈ 35 ಸೇವೆಗಳ ಪಟ್ಟಿ ಮತ್ತು ಅವುಗಳಿಗೆ ನಿಗದಿಪಡಿಸಿದ ಕಾಲಮಿತಿಯ ವಿವರವನ್ನು ಕಳುಹಿಸಲಾಗಿದ್ದು, ಸಕಾಲ ಪೋರ್ಟಲ್ನಲ್ಲಿ ಅಳವಡಿಸಲು ಸೂಚಿಸಲಾಗಿದೆ.
ಈ 35 ಸೇವೆಗಳಲ್ಲಿ ಪ್ರಮುಖವಾಗಿ ಗಳಿಕೆ ರಜೆ ನಗದೀಕರಣ, ಅರೆ ವೇತನ ರಜೆ, ವೈದ್ಯಕೀಯ ರಜೆ, ಹೆರಿಗೆ ರಜೆ, ವೇತನ ನಿಗದಿ, ವಾರ್ಷಿಕ ವೇತನ ಬಡ್ತಿ, ಸೇವಾವಧಿ ವಿಸ್ತರಣೆ, ನಿವೃತ್ತಿ ಉಪದಾನ, ಕುಟುಂಬ ಪಿಂಚಣಿ, ವರ್ಗಾವಣೆ ರಜೆ, ಸೇವಾ ದೃಢೀಕರಣ ಪ್ರಮಾಣಪತ್ರ ಸೇರಿವೆ.

[…] […]