2 ವರ್ಷವಾದರೂ ಮಗು ಸರಿಯಾಗಿ ಮಾತನಾಡುತ್ತಿಲ್ಲವೇ? ದಿನವಿಡೀ ಮೊಬೈಲ್ ಕೊಟ್ಟು ಸುಮ್ಮನಾಗಿಸುವುದಷ್ಟೇ ಅಲ್ಲ, ಪೋಷಕರ ಈ ಸಣ್ಣ ನಿರ್ಲಕ್ಷ್ಯದಿಂದಲೇ ಮಕ್ಕಳಲ್ಲಿ ಮಾತಿನ ಬೆಳವಣಿಗೆ (Baby First Word) ಕುಂಠಿತವಾಗುತ್ತದೆ ಎನ್ನುತ್ತಾರೆ ತಜ್ಞರು.
| ಹೈಲೈಟ್ಸ್: |
|
ಇಂದಿನ ಬಹುತೇಕ ಪೋಷಕರಿಗೆ ಇರುವ ದೊಡ್ಡ ಚಿಂತೆ ಎಂದರೆ ತಮ್ಮ ಮಗು ಬೇಗ ಮಾತನಾಡುತ್ತಿಲ್ಲ (Baby First Word) ಎಂಬುದು. ಮೊದಲೆಲ್ಲ ಒಂದು ವರ್ಷಕ್ಕೆ ಮಾತನಾಡುತ್ತಿದ್ದ ಮಕ್ಕಳು, ಇತ್ತೀಚಿನ ದಿನಗಳಲ್ಲಿ 2-3 ವರ್ಷವಾದರೂ ಸರಿಯಾಗಿ ಮಾತನಾಡುತ್ತಿಲ್ಲವೆಂದರೆ, ಕೂಡಲೇ ಮೊಬೈಲ್ ಮೇಲೆ ಗೂಬೆ ಕೂರಿಸುತ್ತಾರೆ. ಮೊಬೈಲ್ ಒಂದು ಕಾರಣವಾದರೂ, ಅದೊಂದೇ ಕಾರಣವಲ್ಲವಲ್ಲ. ಪೋಷಕರು ಅರಿವಿಲ್ಲದೆಯೇ ಮಾಡುವ ಕೆಲವು ಸಣ್ಣ ತಪ್ಪುಗಳೇ ಮಕ್ಕಳ ಮಾತು ತಡವಾಗಲು ಮುಖ್ಯ ಕಾರಣ ಎಂದು ಮಕ್ಕಳ ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಸ್ಪೀಚ್ ಥೆರಪಿಸ್ಟ್ ಡಾ. ಪ್ರೀತಿ ಅವರ ಪ್ರಕಾರ, ಮಕ್ಕಳು ಮಾತು ಕಲಿಯುವುದು ಮನೆಯ ವಾತಾವರಣದಿಂದ. ಆ ವಾತಾವರಣ ಸರಿಯಿಲ್ಲದಿದ್ದರೆ ಎಷ್ಟು ಮೊಬೈಲ್ ದೂರ ಇಟ್ಟರೂ ಪ್ರಯೋಜನವಿಲ್ಲ. ಹಾಗಾದರೆ ಪೋಷಕರು ಮಾಡುವ ಐದು ಸಾಮಾನ್ಯ ತಪ್ಪುಗಳು ಯಾವುವು? ಎಂಬುದನ್ನು ತಿಳಿಯೋಣ ಬನ್ನಿ.
PM Dhan Dhaanya: ರೈತರಿಗೆ ಗುಡ್ ನ್ಯೂಸ್! ಮೋದಿ ಸರ್ಕಾರದ ಪಿಎಂ ಧನ-ಧಾನ್ಯ ಕೃಷಿ ಯೋಜನೆ,1.7 ಕೋಟಿ ರೈತರಿಗೆ ಅನುಕೂಲ
1. ಮಗುವಿನ (Baby First Word) ಬದಲು ನೀವೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವುದು:
ಮಗು ಬೆರಳು ತೋರಿಸಿದ ತಕ್ಷಣ, “ನೀರು ಬೇಕಾ? ಬಿಸ್ಕೆಟ್ ಬೇಕಾ?” ಎಂದು ನೀವೇ ಊಹಿಸಿ ಬೇಕಾದದ್ದನ್ನೆಲ್ಲ ಕೊಟ್ಟುಬಿಡುತ್ತೀರಿ. ಹೀಗೆ ಮಾಡಿದಾಗ ಮಗುವಿಗೆ ಮಾತನಾಡಿ ಕೇಳುವ ಅಗತ್ಯವೇ ಬರುವುದಿಲ್ಲ. ಮಗು ಸನ್ನೆ ಮಾಡಿದಾಗ, “ನಿನಗೆ ಏನು ಬೇಕು ಹೇಳು, ನೀರು ಬೇಕಾ ಅಂತ ಹೇಳು” ಎಂದು ಪದಗಳನ್ನು ಹೇಳಲು ಪ್ರೇರೇಪಿಸಿ. ಮಗು ಶುರುವಿನಲ್ಲಿ ಭಾಷೆಯ ಉಚ್ಚಾರ ತಪ್ಪು ಮಾಡುವುದು ಸಹಜ. ತಪ್ಪನ್ನು ಖಂಡಿಸದೇ ತಿದ್ದಿ ಹೇಳಿದಾಗಲೇ ಮಕ್ಕಳು ಅರ್ಥಮಾಡಿಕೊಳ್ಳಲಾರಂಭಿಸುತ್ತಾರೆ. ಅದಾಗ್ಯೂ ಮಕ್ಕಳ ಪ್ರಯತ್ನಕ್ಕೆ ಮೆಚ್ಚುಗೆ ನೀಡಿ.
2. ಮನೆಯಲ್ಲಿ ಜೋರಾಗಿ ಮಾತನಾಡುವುದು / ಜಗಳವಾಡುವುದು:
ಕೆಲ ಮನೆಗಳಲ್ಲಿ ಪೋಷಕರು ಜೋರಾಗಿ ಮಾತನಾಡುತ್ತಾರೆ ಅಥವಾ ಟಿವಿ ಸೌಂಡ್ ಜೋರಾಗಿ ಇರುತ್ತದೆ. ಇಂತಹ ಗದ್ದಲದ ವಾತಾವರಣದಲ್ಲಿ ಮಗುವಿಗೆ ಯಾವ ಪದವನ್ನು ಕೇಳಬೇಕು, ಯಾವುದನ್ನು ಬಿಡಬೇಕು ಎಂದು ಗೊಂದಲವಾಗುತ್ತದೆ. ಮಗು ಹೆದರಿ ಮಾತನಾಡುವುದನ್ನೇ (Baby First Word) ನಿಲ್ಲಿಸುತ್ತದೆ. ಮನೆಯಲ್ಲಿ ಮಗುವಿನ ಜೊತೆ ನಿಧಾನವಾಗಿ, ಸ್ಪಷ್ಟವಾಗಿ ಮತ್ತು ಪ್ರೀತಿಯಿಂದ ಮಾತನಾಡಿ.
3. ಒಂದೇ ಸಮನೆ ಇಂಗ್ಲಿಷ್ ಕಲಿಸುವ ಆತುರ:
ನನ್ನ ಮಗು ಬೇಗ ಇಂಗ್ಲಿಷ್ ಕಲಿಯಬೇಕು ಎಂದು ಹುಟ್ಟಿದಾಗಿನಿಂದಲೇ ಇಂಗ್ಲಿಷ್ ರೈಮ್ಸ್, ಇಂಗ್ಲಿಷ್ ನಲ್ಲೇ ಮಾತನಾಡುವುದು ಮಾಡುತ್ತಾರೆ. ಆದರೆ 3 ವರ್ಷದೊಳಗಿನ ಮಕ್ಕಳಿಗೆ ಮಾತೃಭಾಷೆ (ಕನ್ನಡ) ಯ ಬೇಸ್ ಸ್ಟ್ರಾಂಗ್ ಆಗಬೇಕು. ಒಂದೇ ಬಾರಿಗೆ ಎರಡು ಭಾಷೆಗಳನ್ನು ಜೋರಾಗಿ ತುರುಕಿದರೆ ಮಕ್ಕಳಿಗೆ Language Confusion ಆಗುತ್ತದೆ. ಮೊದಲು ಕನ್ನಡದಲ್ಲಿ ಚೆನ್ನಾಗಿ ಮಾತನಾಡಲು ಬಿಡಿ, ಇಂಗ್ಲಿಷ್ ತಾನಾಗಿಯೇ ಬರುತ್ತದೆ.
4. ಮಗುವಿನ ಜೊತೆ ಮಾತನಾಡದೆ, ಕೇವಲ ಆಟಿಕೆ ಕೊಡುವುದು:
ದೊಡ್ಡ ದೊಡ್ಡ ದುಬಾರಿ ಆಟಿಕೆಗಳನ್ನು ಕೊಟ್ಟರೆ ಮಗು ಬುದ್ಧಿವಂತನಾಗುತ್ತಾನೆ ಎಂದುಕೊಳ್ಳುತ್ತೇವೆ. ಆದರೆ ಆಟಿಕೆಗಿಂತ ಮುಖ್ಯವಾದುದು ನಿಮ್ಮ ಸಮಯ. ದಿನಕ್ಕೆ ಕನಿಷ್ಠ 20 ನಿಮಿಷವಾದರೂ ಮೊಬೈಲ್ ಇಲ್ಲದೆ, ಟಿವಿ ಇಲ್ಲದೆ ನೆಲದ ಮೇಲೆ ಕುಳಿತು ಮಗುವಿನ ಜೊತೆ ಆಟ ಆಡಿ. ಕಥೆ ಹೇಳಿ, “ಇದು ಯಾವ ಬಣ್ಣ? ಇದು ಏನು?” ಎಂದು ಪ್ರಶ್ನೆಗಳನ್ನು ಕೇಳಿ. ಈ Serve and Return ಸಂಭಾಷಣೆಯೇ ಮೆದುಳಿನ ಬೆಳವಣಿಗೆಗೆ ಟಾನಿಕ್ ಇದ್ದಂತೆ.
5. ಸ್ಕ್ರೀನ್ ಟೈಮ್ ಅನ್ನು ಸುಮ್ಮನಾಗಿಸುವ ಅಸ್ತ್ರ ಮಾಡಿಕೊಳ್ಳುವುದು:
ಮಗು ಅಳುತ್ತಿದ್ದರೆ, ಊಟ ಮಾಡದಿದ್ದರೆ ಕೂಡಲೇ ಮೊಬೈಲ್ ಕೊಡುವುದು. ಇದರಿಂದ ಮಗು ಸುಮ್ಮನಾಗುತ್ತದೆ ನಿಜ, ಆದರೆ ಮಗು ಮಾತನಾಡಲು ಬೇಕಾದ ಸಾಮಾಜಿಕ ಸಂವಹನವೇ ನಿಂತು ಹೋಗುತ್ತದೆ. WHO ಪ್ರಕಾರ 2 ವರ್ಷದೊಳಗಿನ ಮಕ್ಕಳಿಗೆ ಸ್ಕ್ರೀನ್ ಟೈಮ್ ಸೊನ್ನೆಯಾಗಿರಬೇಕು. 2-5 ವರ್ಷದ ಮಕ್ಕಳಿಗೆ ದಿನಕ್ಕೆ 1 ಗಂಟೆಗಿಂತ ಹೆಚ್ಚು ಕೊಡಬಾರದು.
ನೆನಪಿಡಿ, ಪ್ರತಿ ಮಗುವಿನ ಬೆಳವಣಿಗೆ ಬೇರೆ ಬೇರೆಯಾಗಿರುತ್ತದೆ. ಸ್ವಲ್ಪ ತಡವಾದರೂ ಚಿಂತೆ ಬೇಡ. ಆದರೆ 2 ವರ್ಷವಾದರೂ 10 ಪದಗಳನ್ನೂ ಮಾತನಾಡದಿದ್ದರೆ, ಕಣ್ಣಲ್ಲಿ ಕಣ್ಣಿಟ್ಟು ನೋಡದಿದ್ದರೆ, ಹೆಸರು ಕರೆದರೂ ತಿರುಗಿ ನೋಡದಿದ್ದರೆ ತಕ್ಷಣ ಮಕ್ಕಳ ವೈದ್ಯರನ್ನು ಭೇಟಿ ಮಾಡುವುದು ತುಂಬಾ ಮುಖ್ಯ.

[…] […]