Bittu Tabahi: ಒಂಟಿಯಾಗಿ ನದಿ ಕ್ಲೀನ್ ಮಾಡಿದ 20 ವರ್ಷದ ಯುವಕನಿಗೆ ಒಲಿದ ಅದೃಷ್ಟ: ಜಾಗತಿಕ ಸಂಸ್ಥೆಯಿಂದ ಅಚ್ಚರಿಯ ಆಫರ್!

ವಿಶ್ವಖ್ಯಾತಿಯ 'ದಿ ಓಷನ್ ಕ್ಲೀನಪ್' (The Ocean Cleanup) ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ Boyan Slat ಅವರಿಂದ, Bittu Tabahi ಅವರ ಕಾರ್ಯ ಮೆಚ್ಚಿ ತಮ್ಮ ಸಂಸ್ಥೆಗೆ ಕೆಲಸಕ್ಕೆ ಬರುವಂತೆ ಆಹ್ವಾನ

ನವದೆಹಲಿ: ಕಳೆದ ಕೆಲವು ತಿಂಗಳುಗಳಿಂದ ಕಸದಿಂದ ತುಂಬಿದ್ದ ಅಜ್ನಾರ್ ನದಿಯನ್ನು (Ajnar River) ಸ್ವಚ್ಛಗೊಳಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ 20 ವರ್ಷದ ಯುವಕ Surendra Singh Choudhary (Bittu Tabahi) ಅವರಿಗೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೌರವ ಹಾಗೂ ಉದ್ಯೋಗಾವಕಾಶ ಸಿಕ್ಕಿದೆ.

ಹೌದು, ವಿಶ್ವಖ್ಯಾತಿಯ ‘ದಿ ಓಷನ್ ಕ್ಲೀನಪ್’ (The Ocean Cleanup) ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ Boyan Slat ಅವರು ಬಿಟ್ಟು ಅವರ ಕಾರ್ಯ ಮೆಚ್ಚಿ ತಮ್ಮ ಸಂಸ್ಥೆಗೆ ಕೆಲಸಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ಏನಿದು ಘಟನೆ?
ಯಾವುದೇ ದೊಡ್ಡ ಸರ್ಕಾರಿ ಸಹಾಯ ಅಥವಾ ಅನುದಾನವಿಲ್ಲದೆ, ಈ ಯುವಕ ಒಂಟಿಯಾಗಿ ನದಿಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಹೂಳನ್ನು ಸ್ವಚ್ಛಗೊಳಿಸುತ್ತಿದ್ದನು. ನದಿಯ ಸ್ವಚ್ಛತೆಗೂ ಮುಂಚೆ ಮತ್ತು ನಂತರದ ಚಿತ್ರಗಳನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋ ನೆದರ್ಲ್ಯಾಂಡ್ಸ್ ಮೂಲದ ‘ದಿ ಓಷನ್ ಕ್ಲೀನಪ್’ ಸಂಸ್ಥೆಯ ಮುಖ್ಯಸ್ಥ ಬೋಯನ್ ಸ್ಲಾಟ್ ಅವರ ಕಣ್ಣಿಗೆ ಬಿದ್ದಿದೆ.

ಇದೀಗ, ಎಕ್ಸ್ (ಟ್ವಿಟರ್) ಮೂಲಕ ಈ ಯುವಕನ ಸಾಹಸವನ್ನು ನೋಡಿದ ಅವರು, “ನಮ್ಮ ಜತೆಗೆ ಕೆಲಸಕ್ಕೆ ಬನ್ನಿ” (Come work for us) ಎಂದು ನೇರವಾಗಿ ಆಹ್ವಾನ ನೀಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ನೆದರ್ಲ್ಯಾಂಡ್ಸ್‌ನಲ್ಲಿ ಕೆಲಸ ಹಾಗೂ ನೆಲೆಸುವ ಅವಕಾಶ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

Bittu Tabahi ಗೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಈ ಬೆಳವಣಿಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಅನೇಕರು ಯುವಕನಿಗೆ ಈ ಸುವರ್ಣಾವಕಾಶ ಸಿಕ್ಕಿರುವುದು ಖುಷಿಯ ವಿಚಾರ ಎಂದು ಹೇಳುತ್ತಿದ್ದು, ತಕ್ಷಣವೇ ಈ ಆಫರ್ ಸ್ವೀಕರಿಸಿ ವಿದೇಶಕ್ಕೆ ತೆರಳಿ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ. ಇನ್ನು ಕೆಲವರು Bittu Tabahi ಅವರಿಗೆ, “ವಿದೇಶಿಗರು ಭಾರತದ ಪರಿಸ್ಥಿತಿಯನ್ನು ಹೀಯಾಳಿಸಲು ಇಂತಹ ಆಫರ್‌ಗಳನ್ನು ನೀಡುತ್ತಿದ್ದಾರೆ” ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಒಟ್ಟಿನಲ್ಲಿ, ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವಂತೆ, ನದಿ ಸ್ವಚ್ಛಗೊಳಿಸಿ ಪರಿಸರ ಕಾಳಜಿ ಮೆರೆದ ಭಾರತೀಯ ಯುವಕನೊಬ್ಬನ ಸಾಧನೆ ಈಗ ಜಾಗತಿಕ ಮಟ್ಟದ ಸಂಸ್ಥೆಯ ಗಮನ ಸೆಳೆದಿರುವುದು ಎಲ್ಲೆಡೆ ಹೆಮ್ಮೆಯ ವಿಷಯವಾಗಿದೆ.