Blue Zones: 100 ವರ್ಷ ದಾಟಿದರೂ ಚುರುಕಿನ ಬದುಕು! ಜಗತ್ತಿನ ಈ 5 ಪ್ರದೇಶಗಳ ಜನರ ದೀರ್ಘಾಯುಷ್ಯದ ಹಿಂದಿದೆ ಈ ರಹಸ್ಯ

ಸಂಶೋಧಕ ಹಾಗೂ ಲೇಖಕ ಡ್ಯಾನ್ ಬ್ಯೂಟ್ನರ್ ಅವರು ಹಲವು ವರ್ಷಗಳ ಅಧ್ಯಯನದ ಬಳಿಕ ಜಗತ್ತಿನಲ್ಲಿ ದೀರ್ಘಾಯುಷ್ಯದ ಜನರು ಹೆಚ್ಚಾಗಿ ಕಂಡುಬರುವ ಐದು ಪ್ರದೇಶ (Blue Zones)ಗಳನ್ನು ಗುರುತಿಸಿದ್ದರು.

ಕೆಲವರು 100 ವರ್ಷ ದಾಟಿದ ಬಳಿಕವೂ ಆರೋಗ್ಯದಿಂದ, ಚೈತನ್ಯದಿಂದ ಜೀವನ ಸಾಗಿಸುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಆದರೆ ಜಗತ್ತಿನಲ್ಲಿ ಇಂತಹುದು ಸಾಮಾನ್ಯವಾಗಿರುವ ಕೆಲವು ಪ್ರದೇಶಗಳಿವೆ. ಈ ಪ್ರದೇಶಗಳಲ್ಲಿ ವಾಸಿಸುವ ಜನರು ಕೇವಲ ಹೆಚ್ಚು ವರ್ಷ ಬದುಕುವುದಷ್ಟೇ ಅಲ್ಲ, ವೃದ್ಧಾಪ್ಯದಲ್ಲಿಯೂ ಸ್ವಾವಲಂಬಿಯಾಗಿ, ಸಕ್ರಿಯವಾಗಿ ಜೀವನ ನಡೆಸುತ್ತಾರೆ. ಇಂತಹ ಪ್ರದೇಶಗಳನ್ನು ವಿಜ್ಞಾನಿಗಳು ‘ಬ್ಲೂ ಝೋನ್ಸ್’ (Blue Zones)ಎಂದು ಕರೆಯುತ್ತಾರೆ.

Blue Zones
Blue Zones

ಸಂಶೋಧಕ ಹಾಗೂ ಲೇಖಕ ಡ್ಯಾನ್ ಬ್ಯೂಟ್ನರ್ ಅವರು ಹಲವು ವರ್ಷಗಳ ಅಧ್ಯಯನದ ಬಳಿಕ ಜಗತ್ತಿನಲ್ಲಿ ದೀರ್ಘಾಯುಷ್ಯದ ಜನರು ಹೆಚ್ಚಾಗಿ ಕಂಡುಬರುವ ಐದು ಪ್ರದೇಶ (Blue Zones)ಗಳನ್ನು ಗುರುತಿಸಿದ್ದರು. ಅವರ ಅಧ್ಯಯನದ ಪ್ರಕಾರ, ಈ ಜನರ ದೀರ್ಘಾಯುಷ್ಯದ ಹಿಂದೆ ಔಷಧಿಗಳಿಗಿಂತ ಹೆಚ್ಚಾಗಿ ಸರಳ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ಸಾಮಾಜಿಕ ಬಾಂಧವ್ಯ ಮತ್ತು ಒತ್ತಡರಹಿತ ಜೀವನಶೈಲಿ ಪ್ರಮುಖ ಪಾತ್ರವಹಿಸುತ್ತವೆ.

Bittu Tabahi: ಒಂಟಿಯಾಗಿ ನದಿ ಕ್ಲೀನ್ ಮಾಡಿದ 20 ವರ್ಷದ ಯುವಕನಿಗೆ ಒಲಿದ ಅದೃಷ್ಟ: ಜಾಗತಿಕ ಸಂಸ್ಥೆಯಿಂದ ಅಚ್ಚರಿಯ ಆಫರ್!

ಒಕಿನಾವಾ, ಜಪಾನ್

ಜಪಾನ್‌ನ ಒಕಿನಾವಾ ದ್ವೀಪವು ದೀರ್ಘಾಯುಷ್ಯದ ಜನರಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಜನರು ಹೊಟ್ಟೆ ತುಂಬುವ ಮೊದಲು ಊಟವನ್ನು ನಿಲ್ಲಿಸುವ ‘ಹರಾ ಹಾಚಿ ಬು (Hara Hachi Bu)’ ಎಂಬ ಪದ್ಧತಿಯನ್ನು ಪಾಲಿಸುತ್ತಾರೆ. ಸಿಹಿ ಆಲೂಗಡ್ಡೆ, ತೋಫು, ಹಸಿರು ಸೊಪ್ಪುಗಳು ಹಾಗೂ ಸಮುದ್ರ ಸಸ್ಯಗಳು ಇವರ ಆಹಾರದ ಪ್ರಮುಖ ಭಾಗವಾಗಿವೆ.

ಸಾರ್ಡಿನಿಯಾ, ಇಟಲಿ (Blue Zones)

ಇಟಲಿಯ ಸಾರ್ಡಿನಿಯಾ ಪ್ರದೇಶದಲ್ಲಿ 100 ವರ್ಷ ದಾಟಿದ ಪುರುಷರ ಸಂಖ್ಯೆ ಗಮನಾರ್ಹವಾಗಿದೆ. ಧಾನ್ಯಗಳು, ಬೇಳೆಕಾಳುಗಳು, ಆಲಿವ್ ಎಣ್ಣೆ ಮತ್ತು ತಾಜಾ ತರಕಾರಿಗಳನ್ನೇ ಹೆಚ್ಚಾಗಿ ಸೇವಿಸುವ ಇಲ್ಲಿನ ಜನರು ಪ್ರತಿದಿನ ದೈಹಿಕ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ಅವರ ಜೀವನಶೈಲಿಯ ಮತ್ತೊಂದು ವಿಶೇಷತೆ.

ಇಕಾರಿಯಾ, ಗ್ರೀಸ್

ಗ್ರೀಸ್‌ನ ಇಕಾರಿಯಾ ದ್ವೀಪದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮರೆವಿನ ಸಮಸ್ಯೆ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತವೆ. ಬೇಳೆಕಾಳುಗಳು, ಹಸಿರು ಸೊಪ್ಪುಗಳು, ಆಲಿವ್ ಎಣ್ಣೆ, ಮೀನು ಹಾಗೂ ಔಷಧೀಯ ಸಸ್ಯಗಳಿಂದ ತಯಾರಿಸಿದ ಚಹಾಗಳನ್ನು ಸೇವಿಸುವುದು ಇಲ್ಲಿನ ಜನರ ಆರೋಗ್ಯದ ಪ್ರಮುಖ ಕಾರಣವೆಂದು ಅಧ್ಯಯನಗಳು ಸೂಚಿಸುತ್ತವೆ.

ನಿಕೋಯಾ, ಕೋಸ್ಟಾ ರಿಕಾ

ಕೋಸ್ಟಾ ರಿಕಾದ ನಿಕೋಯಾ ಪ್ರದೇಶದ (Blue Zones) ಜನರು ಜೋಳ, ಬೀನ್ಸ್, ಕುಂಬಳಕಾಯಿ ಹಾಗೂ ತಾಜಾ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಜೊತೆಗೆ ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು ಬದುಕುವುದು ಹಾಗೂ ಪ್ರತಿದಿನ ಸಕ್ರಿಯ ಜೀವನ ನಡೆಸುವುದು ಅವರ ದೀರ್ಘಾಯುಷ್ಯಕ್ಕೆ ನೆರವಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಲೋಮಾ ಲಿಂಡಾ, ಅಮೆರಿಕ

ಅಮೆರಿಕದ ಕ್ಯಾಲಿಫೋರ್ನಿಯಾದ ಲೋಮಾ ಲಿಂಡಾದ ನಿವಾಸಿಗಳು ಹೆಚ್ಚಾಗಿ ಸಸ್ಯಾಹಾರವನ್ನು ಅನುಸರಿಸುತ್ತಾರೆ. ಬೇಳೆಕಾಳುಗಳು, ಧಾನ್ಯಗಳು, ಒಣಹಣ್ಣುಗಳು ಹಾಗೂ ತಾಜಾ ಹಣ್ಣುಗಳು ಅವರ ಆಹಾರದ ಪ್ರಮುಖ ಭಾಗವಾಗಿವೆ. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಅವರ ಆರೋಗ್ಯಕರ ಜೀವನದ ಮತ್ತೊಂದು ಪ್ರಮುಖ ಅಂಶವಾಗಿದೆ.

Blue Zones ಜನರ ದೀರ್ಘಾಯುಷ್ಯದ ಸಾಮಾನ್ಯ ರಹಸ್ಯ

ಈ ಐದು ಪ್ರದೇಶಗಳ ಜನರಲ್ಲಿ ಕೆಲವು ಸಾಮಾನ್ಯ ಅಭ್ಯಾಸಗಳು ಕಂಡುಬರುತ್ತವೆ. ಸರಳ ಮತ್ತು ಪೌಷ್ಟಿಕ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ಒತ್ತಡವನ್ನು ನಿಯಂತ್ರಣದಲ್ಲಿಡುವುದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವುದು ಹಾಗೂ ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವ ಹೊಂದಿರುವುದು ಅವರ ಆರೋಗ್ಯ ಮತ್ತು ದೀರ್ಘಾಯುಷ್ಯದ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಹೇಳುತ್ತಾರೆ.