AI ಎಫೆಕ್ಟ್‌! 2026ರ ಅರ್ಧ ವರ್ಷದಲ್ಲೇ 1.28 ಲಕ್ಷ ಟೆಕ್ ಉದ್ಯೋಗ ಕಡಿತ: ಭಾರತಕ್ಕೆ 2ನೇ ಅತಿ ದೊಡ್ಡ ಹೊಡೆತ

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಬಳಕೆ ವೇಗವಾಗಿ ಹೆಚ್ಚುತ್ತಿರುವ ಪರಿಣಾಮ ಜಾಗತಿಕ ಟೆಕ್ ಉದ್ಯಮದಲ್ಲಿ ಉದ್ಯೋಗ ಕಡಿತ (Layoffs) ಮುಂದುವರಿದಿದೆ.

ಹೌದು,2026ರ ಜನವರಿ 1ರಿಂದ ಜುಲೈ 1ರವರೆಗೆ ವಿಶ್ವದಾದ್ಯಂತ 1.28 ಲಕ್ಷ ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದು 2025ರ ಇಡೀ ವರ್ಷದಲ್ಲಿ ದಾಖಲಾಗಿದ್ದ 1.25 ಲಕ್ಷ ಉದ್ಯೋಗ ಕಡಿತಕ್ಕಿಂತಲೂ ಹೆಚ್ಚು ಎಂದು Layoffs.fyi ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ತಿಳಿಸಿವೆ.

ಮುಖ್ಯ ಅಂಕಿ-ಅಂಶಗಳು

  • 2026 (ಜುಲೈ 1ರವರೆಗೆ): 1.28 ಲಕ್ಷ ಉದ್ಯೋಗ ಕಡಿತ
  • 2025 (ಇಡೀ ವರ್ಷ): 1.25 ಲಕ್ಷ ಉದ್ಯೋಗ ಕಡಿತ
  • 2023ರಲ್ಲಿ ಗರಿಷ್ಠ: ಸುಮಾರು 2.66 ಲಕ್ಷ ಉದ್ಯೋಗ ಕಡಿತ
  • 2022: 1.65 ಲಕ್ಷಕ್ಕೂ ಹೆಚ್ಚು
  • 2020: ಸುಮಾರು 81 ಸಾವಿರ
  • 2021: 2020ಕ್ಕೆ ಹೋಲಿಸಿದರೆ ಉದ್ಯೋಗ ಕಡಿತದಲ್ಲಿ ಇಳಿಕೆ

ಯಾವ ದೇಶಕ್ಕೆ ಹೆಚ್ಚು ಹೊಡೆತ?

2020ರಿಂದ 2026ರ ಜುಲೈವರೆಗೆ ನಡೆದ AI ಆಧಾರಿತ ಟೆಕ್ ಉದ್ಯೋಗ ಕಡಿತದಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಒಟ್ಟು ಉದ್ಯೋಗ ಕಡಿತದ ಶೇ.71.33ರಷ್ಟು ಪಾಲು ಹೊಂದಿದೆ. ಭಾರತ ಶೇ.7.16ರೊಂದಿಗೆ ಎರಡನೇ ಸ್ಥಾನದಲ್ಲಿದೆ.

  • ಜರ್ಮನಿ – 3.43%
  • ಯುನೈಟೆಡ್ ಕಿಂಗ್‌ಡಮ್ – 2.64%
  • ಇತರೆ ದೇಶಗಳು – 15.44%

ಭಾರತದಲ್ಲಿ ಯಾವ ಕ್ಷೇತ್ರಕ್ಕೆ ಹೆಚ್ಚು ಪರಿಣಾಮ?

ಭಾರತದಲ್ಲಿ AI ಕಾರಣದಿಂದ ಉದ್ಯೋಗ ಕಡಿತ ಎಲ್ಲ ಕ್ಷೇತ್ರಗಳ ಮೇಲೂ ಸಮಾನವಾಗಿ ಆಗಿಲ್ಲ. ಶಿಕ್ಷಣ ಕ್ಷೇತ್ರವೇ ಅತಿ ಹೆಚ್ಚು ಹೊಡೆತ ಅನುಭವಿಸಿದೆ.

  • ಶಿಕ್ಷಣ – 21.67%
  • ಹಣಕಾಸು – 14.73%
  • ಆಹಾರ – 12.26%
  • ಸಾರಿಗೆ – 11.03%
  • ಗ್ರಾಹಕ ಸೇವೆ/ಉತ್ಪನ್ನ ಕ್ಷೇತ್ರ – 11%

AI ಯಾಕೆ ಉದ್ಯೋಗ ಕಡಿತಕ್ಕೆ ಕಾರಣವಾಗುತ್ತಿದೆ?

ಕಂಪನಿಗಳು ವೆಚ್ಚ ಕಡಿಮೆ ಮಾಡುವುದು ಹಾಗೂ ಕೆಲಸದ ವೇಗ ಹೆಚ್ಚಿಸಲು AI ಮತ್ತು Automation ತಂತ್ರಜ್ಞಾನಗಳನ್ನು ಹೆಚ್ಚು ಬಳಸುತ್ತಿವೆ. ಇದರಿಂದ ಹಿಂದೆ ಮನುಷ್ಯರು ಮಾಡುತ್ತಿದ್ದ ಕೆಲವು ಕೆಲಸಗಳನ್ನು ಈಗ AI ನಿರ್ವಹಿಸುತ್ತಿರುವುದರಿಂದ ಹಲವು ಸಾಂಪ್ರದಾಯಿಕ ಉದ್ಯೋಗಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ.

ಹೊಸ ಉದ್ಯೋಗಗಳೂ ಸೃಷ್ಟಿಯಾಗುತ್ತಿವೆ

AI ಕೆಲವು ಉದ್ಯೋಗಗಳನ್ನು ಕಡಿಮೆ ಮಾಡುತ್ತಿದ್ದರೂ, ಮತ್ತೊಂದೆಡೆ Machine Learning, Data Science, AI Engineering, AI Developmentಸೇರಿದಂತೆ ಹೊಸ ಕೌಶಲ್ಯಗಳ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂದು ವರದಿ ಉಲ್ಲೇಖ ಮಾಡಿದೆ.